ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರ್ಡೇಶ್ವರದ ಬಸ್ತಿಮಕ್ಕಿಯಲ್ಲಿ  ನಾಟ್ಯಶ್ರೀ ಬೆಳ್ಳಿಸಂಭ್ರಮ ಸರಣಿ ತಾಳ ಮದ್ದಳೆ ಕಾರ್ಯಕ್ರಮ

ಮುರ್ಡೇಶ್ವರದ ಬಸ್ತಿಮಕ್ಕಿಯಲ್ಲಿ  ನಾಟ್ಯಶ್ರೀ ಬೆಳ್ಳಿಸಂಭ್ರಮ ಸರಣಿ ತಾಳ ಮದ್ದಳೆ ಕಾರ್ಯಕ್ರಮ

Thu, 11 Jul 2024 21:56:51  Office Staff   SOnews

 

ಭಟ್ಕಳ: ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಟಾನ ಕವಲಕ್ಕಿ ಹೊನ್ನಾವರ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ನಾಟ್ಯಶ್ರೀ ಬೆಳ್ಳಿಸಂಭ್ರಮ ಸರಣಿ ತಾಳ ಮದ್ದಳೆ ಕಾರ್ಯಕ್ರಮ ಅಂಗವಾಗಿ ಇಲ್ಲಿನ ಮುರ್ಡೇಶ್ವರದ ಬಸ್ತಿಮಕ್ಕಿಯಲ್ಲಿರುವ ಆಚಾರ್ಯ ಭವನದಲ್ಲಿ ಕಿಷ್ಕಿಂಧಾ ಆಖ್ಯಾನವನ್ನು ಪ್ರದರ್ಶಿಸಲಾಯಿತು.

ಅತಿಥಿಗಳಾದ ವೇ.ಮೂ.ಕೃಷ್ಣಾನಂದ ಭಟ್ಟ ಬಲ್ಸೆ ದಂಪತಿಗಳು, ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಟಾನ ಗೋಳಿಕುಂಬ್ರಿ ಇದರ ಅಧ್ಯಕ್ಷ ನಾಗರಾಜ ಮಧ್ಯಸ್ಥ, ಹೊನ್ನಾವರ ಹವ್ಯಕ ಮಂಡಳದ ಅಧ್ಯಕ್ಷ ಆರ್.ಜಿ. ಹೆಗಡೆ ಇವರು ದೀಪ ಪ್ರಜ್ವಲನಗೈದು ಫಲ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆಚಾರ್ಯ ಭವನದ ಪ್ರಮುಖರಾದ ವೇ.ಮೂ. ಕೃಷ್ಣಾನಂದ ಭಟ್ಟ ಬಲ್ಸೆ ಅವರು ನಮ್ಮೆಲ್ಲರ ಯೋಗ ಮತ್ತು ಭಾಗ್ಯ ಎನ್ನುವಂತೆ ರಾಮಾಯಣ ತಾಳಮದ್ದಲೆಯ ಎರಡು ಆಖ್ಯಾನಗಳನ್ನು ಆಚಾರ್ಯಭವನದಲ್ಲಿ ಮಾಡಲಾಗುತ್ತಿದೆ. ಯಕ್ಷಗಾನ ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು  ಯಕ್ಷಗಾನ ಎನ್ನುವ ಪದವೇ ನಮ್ಮನ್ನು ಧಾರ್ಮಿಕ ಜಾಗೃತಿಯತ್ತ ಕೊಂಡೊಯ್ಯತ್ತದೆ ಎಂದರು. ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಟಾನ ತನ್ನ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಪೌರಾಣಿಕ ಕಥೆಗಳುಳ್ಳ ತಾಳಮದ್ದಳೆ ಪ್ರದರ್ಶನ ಶ್ಲಾಘನೀಯ ಕಾರ್ಯ ಎಂದರು.

ಇದೇ ಸಂದರ್ಭದಲ್ಲಿ ಯಕ್ಷರಕ್ಷೆ ಮುರ್ಡೇಶ್ವರದ ಅಧ್ಯಕ್ಷ ಡಾ. .ಆರ್. ಭಟ್ಟ ಅವರಿಗೆ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಟಾನದ "ರಜತ ಗೌರವ" ಸಮರ್ಪಿಸಲಾಯಿತು. ಸಂದರ್ಭದಲ್ಲಿ ಪ್ರತಿಷ್ಟಾನದ ಗೌರವಾಧ್ಯಕ್ಷ  ಫ್ರೊ. ಎಸ್. ಶಂಭು ಭಟ್ಟ ಕಡತೋಕ, ವಿಧ್ವಾನ್ ನೀಲಕಂಠ ಯಾಜಿ ಬೈಲೂರು, ಕೊಂಡದಕುಳಿ ರಾಮಚಂದ್ರ ಹೆಗಡೆ, ಮೋಹನ ಭಾಸ್ಕರ ಹೆಗಡೆ, ಕೇಶವ ಕೊಳಗಿ  ಮುಂತಾದವರು ಉಪಸ್ಥಿತರಿದ್ದರು. ನಾಟ್ಯಶ್ರಿ ಯಕ್ಷಕಲಾ ಪ್ರತಿಷ್ಟಾನದ ಅಧ್ಯಕ್ಷ ಎಸ್.ಜಿ.ಭಟ್ಟ ಕಬ್ಬಿನಗದ್ದೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ನಂತರ ನಡೆದ ಯಕ್ಷಗಾನ ತಾಳಮದ್ದಳೆ "ಕಿಷ್ಕಿಂದಾ" ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಪರಮೇಶ್ವರ ಭಂಡಾರಿ ಕರ್ಕಿ, ಅರ್ಥದಾರಿಗಳಾಗಿ ವಾಸುದೇವ ರಂಗಾ ಭಟ್ಟ, ರಾಮಚಂದ್ರ ಹೆಗಡೆ ಕೊಂಡದಕುಳಿ, ಜಿ.ಕೆ. ಹೆಗಡೆ ಹರಿಕೇರಿ ಭಾಗವಹಿಸಿದ್ದರು. ರಾಮನಾಗಿ ಭಾಗವಹಿಸಿದ್ದ ಮೋಹನ ಭಾಸ್ಕರ ಹೆಗಡೆ ಅವರ ಆರ್ಥಗಾರಿಕೆ ಎಲ್ಲರ ಗಮನ ಸೆಳೆಯಿತು.


Share: